Friday, March 25, 2022

ಪಟ್ಟಣ ಪಂಚಾಯತಿಗಳಿಗಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು

ಬೀದರ್ (ಮಾ.25): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಮತ್ತು ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳನ್ನು ಇಂದೇ ಪಟ್ಟಣ ಪಂಚಾಯತಿಗಳನ್ನಾಗಿ ಘೋಷಣೆ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದ ಹದಿನಾರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚುಕ್ಕೆಗುರುತಿನ ಪ್ರಶ್ನೆ ಕೇಳಿ ಅವರು ಮಾತನಾಡಿದರು. 

ಭಾಷಣದ ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಬೀದರ್ ದಕ್ಷಿಣ ಕ್ಷೇತ್ರ ಹಳ್ಳಿಗಳಿಂದ ಕೂಡಿದ ಕ್ಷೇತ್ರವಾಗಿದೆ. ನನ್ನ ಕ್ಷೇತ್ರದಲ್ಲಿ 120 ಗ್ರಾಮಗಳಿವೆ. ಕ್ಷೇತ್ರದಲ್ಲಿನ ಕಮಠಾಣಾ, ಮನ್ನಾಎಖೇಳ್ಳಿ, ಮನ್ನಳ್ಳಿ, ನಿರ್ಣಾ, ಬಗದಲ್, ಬೇಮಳಖೇಡ ಸೇರಿದಂತೆ 06 ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗುವ ಅರ್ಹತೆಯನ್ನು ಹೊಂದಿವೆ. ನಾನು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ನೀಡಿರುವ ಉತ್ತರದಲ್ಲಿ ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗುವ ಅರ್ಹತೆಯೊಂದಿವೆ ಎಂದು ತಿಳಿಸಿದ್ದಾರೆ.

ಸರ್ಕಾರ ನೀಡಿರುವ ಮಾನದಂಡಗಳಂತೆ ನನ್ನ ಕ್ಷೇತ್ರದ 06 ಗ್ರಾಮ ಪಂಚಾಯತಿಗಳು ಕೂಡ ಪಟ್ಟಣ ಪಂಚಾಯತಿಗಳಾಗುವ ಅರ್ಹತೆಯನ್ನು ಹೊಂದಿವೆ. ಕ್ಷೇತ್ರದಲ್ಲಿ ಒಂದೇ ಒಂದು ಪಟ್ಟಣ ಪಂಚಾಯತಿ ಇಲ್ಲ. ತಾಲೂಕು ಕೇಂದ್ರ ಕೂಡ ಇಲ್ಲ. ಆಗಾಗಿ ಕ್ಷೇತ್ರದ ಆರು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತನೆ ಮಾಡಿಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಉತ್ತರ ನೀಡಿ ಮಾತನಾಡಿದ ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್ ನಾಗರಾಜು ಎಂ.ಟಿ.ಬಿ ರವರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 31 ಗ್ರಾಮ ಪಂಚಾಯತಿಗಳು ಬರುತ್ತವೆ. ಅವುಗಳಲ್ಲಿ ಬೀದರ್ ತಾಲೂಕಿನಲ್ಲಿ 22 ಹಾಗೂ ಚಿಟಗುಪ್ಪಾ ತಾಲೂಕಿನಲ್ಲಿ 09 ಗ್ರಾಮ ಪಂಚಾಯತಿಗಳಿರುತ್ತವೆ. ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಪರಿವರ್ತನೆಯಾಗಲು ಅರ್ಹತೆಯೊಂದಿವೆ.

ಆದರೇ ಇನ್ನೂ ಕೂಡ ಯಾವುದೇ ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳಿಂದ ಬಂದಿಲ್ಲ. ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದ ತಕ್ಷಣ 02, 03, 04 ಎಷ್ಟೇ ಇರಲಿ ಕೂಡಲೇ ಪಟ್ಟಣ ಪಂಚಾಯತಿಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ಸಚಿವರು ತಿಳಿಸಿದರು.

ಮರುಪ್ರಶ್ನೆ ಕೇಳಿ ಮಾತನಾಡಿದ ಶಾಸಕರು, ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತಿಸಬಹುದು ಎಂದು ಸರ್ಕಾರದ ಉತ್ತರದಲ್ಲಿ ತಿಳಿಸಿದ್ದಾರೆ. ಅದರಂತೆ ಆ ಎರಡು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಸದನದಲ್ಲೇ ಷೋಷಣೆ ಮಾಡಿಬಿಡಿ. ಇನ್ನೂಳಿದಂತೆ ಮನ್ನಳ್ಳಿ, ನಿರ್ಣಾ, ಬಗದಲ್, ಬೇಮಳಖೇಡಗಳನ್ನು ಜೂನ್ 30ರೊಳಗೆ ಜಿಲ್ಲಾಧಿಕಾರಿಗಳಿಂದ ನಾವು ಪ್ರಸ್ತಾವನೆ ಸಲ್ಲಿಸಿದ ನಂತರ ಮಾಡಿಕೊಡಿ ಎಂದು ಒತ್ತಾಯಿಸಿದರು. ಈ ವೇಳೆ ಉತ್ತರ ನೀಡಿದ ಸಚಿವರು, ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದ ನಂತರ ನಾವು ಅಧಿಸೂಚನೆ ಹೊರಡಿಸಿ ಪಟ್ಟಣ ಪಂಚಾಯತಿಗಳನ್ನಾಗಿ ಮಾಡಲು ಸರ್ಕಾರದಿಂದ ಕ್ರಮಕೈಗೊಳ್ಳುತ್ತೇವೆ ಎಂದರು.

No comments:

Post a Comment