Friday, March 18, 2022

2019-20ರ ಬಜೆಟ್ ಅನ್ನು ಸಹಕಾರ ಸಚಿವರು ಓದ್ಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

ಹನ್ನೊಂದನೇ ದಿನದ ಕಲಾಪದಲ್ಲಿ ಶಾಸಕರಾದ ಖಾಶೆಂಪುರ್  ರವರು ಮಾತನಾಡುತ್ತಿರುವುದು.

ಬೀದರ್ (ಮಾ.18): 2019-20ರ ಬಜೆಟ್ ಮಂಡನೆ ವೇಳೆ ಕುಮಾರಸ್ವಾಮಿರವರ ಸರ್ಕಾರದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಆಗ ನಾವು ಸಹಕಾರ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವು. ಈಗಿನ ಸಹಕಾರ ಸಚಿವರಿಗೆ ಟೈಮ್ ಸಿಕ್ಕರೆ 2019-20ರ ಬಜೆಟ್ ಅನ್ನು ಓದಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದ ಹನ್ನೊಂದನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  2019-20ರ ಬಜೆಟ್ ನಲ್ಲಿ ಘೋಷಿಸಿದ ಪ್ರಕಾರ, ರೈತರು ಬೆಳೆದ ಬೆಳೆಗಳ ರಾಶಿ ಮಾಡಿದ ಬಳಿಕ ಉತ್ಪನ್ನಗಳನ್ನು ಗೋಡನ್ ಗಳಿಗೆ ಸಾಗಿಸಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗೋಡನ್ ಗಳಲ್ಲಿ 08 ತಿಂಗಳುಗಳವರೆಗೂ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಶುಲ್ಕವಿಲ್ಲದೆ ಸಂಗ್ರಹಿಸಿಡಬಹುದಿತ್ತು ಎಂದರು.

ಸಂಪೂರ್ಣ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ಕೇವಲ ಒಂದೆರಡು ತಿಂಗಳುಗಳಿಗೆ ಸೀಮಿತಗೊಳಿಸಲಾಗಿದೆ. ನಾವು ಮಂಡಿಸಿದ ಬಜೆಟ್ ನಲ್ಲಿ 08 ತಿಂಗಳುಗಳವರೆಗೂ ಖರೀದಿ ಕೇಂದ್ರಗಳನ್ನು ತೆರೆದಿಡುವ ಯೋಜನೆ ರೂಪಿಸಲಾಗಿತ್ತು. ರೈತ ಮನಸ್ಸು ಬಂದಾಗ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಿತ್ತು. ರೈತನಿಗೆ ಸಹಕಾರಿ ಬ್ಯಾಂಕ್, ನ್ಯಾಷನಲ್ ಬ್ಯಾಂಕ್ ಗಳಿಂದ ಇಂಟ್ರಸ್ಟಡ್ ಸಬ್ಸಿಡಿ ಮೇಲೆ ಪ್ರೀ ಲೋನ್ ಕೊಡ್ಬೇಕು ಎಂಬ ಯೋಜನೆಯನ್ನು 2019-20ರ ಬಜೆಟ್ ನಲ್ಲಿ ತಂದಿದ್ದೇವು.

2019-20ರ ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವಂತ ಅನೇಕ ಯೋಜನೆಗಳನ್ನು ಘೋಷಿಸಲಾಗಿತ್ತು. ಸಹಕಾರ ಇಲಾಖೆಯನ್ನು ರೈತ ಸ್ನೇಹಿಯನ್ನಾಗಿ ಮಾಡುವ ಯೋಜನೆಗಳು ಆ ಬಜೆಟ್ ನಲ್ಲಿದ್ದವು. ಸಹಕಾರ ಸಚಿವರು, ಇಲಾಖೆಯವರು, ಸಂಬಂಧಿಸಿದವರು 2019-20ರ ಬಜೆಟ್ ಅನ್ನು ಓದಬೇಕು. ಅಲ್ಲಿ ಘೋಷಿಸಿದ್ದ ಯೋಜನೆಗಳನ್ನು ಮತ್ತು ಅದಕ್ಕೂ ಉತ್ತಮವಾದ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ರೈತರಿಗೆ ನೀಡುತ್ತಿರುವ ವಿದ್ಯುತ್ ಸಮಯ ಹೆಚ್ಚಿಸಲು ಏನು ಸಮಸ್ಯೆ:

2006ರಲ್ಲಿನ ಸಮಿಶ್ರ ಸರ್ಕಾರದ ಸಂದರ್ಭದಲ್ಲಿ ಅತಿ ಹೆಚ್ಚಿನ ಕೆಇಬಿ ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಈಗಿರುವ ಪ್ರಶ್ನೆಯೆಂದರೆ, ಈಗ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಮುಂಚೆ ಯೂನಿಟ್ ವಿದ್ಯುತ್ ಅನ್ನು 08 ರೂ. ಗೆ ಖರೀದಿ ಮಾಡಲಾಗುತ್ತಿತ್ತು. ಈಗ 2 ರೂ. 50 ಪೈಸೆಗೆ ಖರೀದಿ ಮಾಡಲಾಗುತ್ತಿದೆ. ಇಷ್ಟಾದ ಮೇಲು ರೈತರ ಪಂಪ್ ಸೆಟ್ ಗಳಿಗೆ ನೀಡುತ್ತಿರುವ ವಿದ್ಯುತ್ ಅನ್ನು 07 ರಿಂದ 14 ತಾಸುಗಳಿಗೆ ಹೆಚ್ಚಿಸುವುದಕ್ಕೆ ಏನು ಸಮಸ್ಯೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಚಿವ ಗೋವಿಂದ ಕಾರಜೋಳರನ್ನು ಪ್ರಶ್ನಿಸಿದರು.

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಅನ್ನು ಹೊರ ರಾಜ್ಯಗಳಿಗೆ ಕಳಿಸೋದು ಯಾಕ್ ಬೇಕು. ನಮ್ಮ ರೈತರಿಗೆ ಹೆಚ್ಚಿನ ಸಮಯ ವಿದ್ಯುತ್ ನೀಡಿ ರೈತರನ್ನು ಕಲ್ಯಾಣ ಮಾಡುವುದು ಮುಖ್ಯವಲ್ಲವೇ.? ರೈತರ ಬೋರ್ ವೆಲ್ ಗಳಿಗೆ ಹೆಚ್ಚಿನ ವಿದ್ಯುತ್ ನೀಡುವ ಕಡೆಗೆ ಮಹತ್ವ ನೀಡಬೇಕು. ಸರಿಯಾಗಿ ವಿದ್ಯುತ್ ಸೌಲಭ್ಯ ನೀಡಿದರೆ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಉತ್ತಮ ಇಳುವರಿ ಬರುತ್ತದೆ. ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಅನೇಕರು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಸಚಿವ ಗೋವಿಂದ ಕಾರಜೋಳರವರು, ಕೆಇಬಿಯಲ್ಲಿ ಆಗಬೇಕಾಗಿರುವ ಸುಧಾರಣೆಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.

No comments:

Post a Comment