Sunday, September 23, 2018

ಕಲಬುರಗಿ ಜಿಲ್ಲೆಯಲ್ಲೊಂದು ಪುರಾತನ ದೇವಾಲಯ ಪತ್ತೆ

ದೊರೆನ್ಯೂಸ್: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಪುರಾತನ ದೇವಾಲಯವೊಂದು ಪತ್ತೆಯಾಗಿದೆ.
ಈ ದೇವಾಲಯವು ರಾವೂರ ಗ್ರಾಮದ ಕನಕನಗರದಲ್ಲಿದ್ದು  ಎಂಟನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಟ್ಟಿರಬಹುದೆಂದು ಅಂದಾಜಿಸಲಾಗಿದೆ.
48 ಕಂಬಗಳಿಂದ ಕೂಡಿದ ಈ ದೇವಾಲಯ ಗಿಡಮರಗಳಿಂದ ತುಂಬಿದ್ದು, ಸಂಪೂರ್ಣ ಭೂಮಿಯ ಒಳಗಡೆ ಮುಳುಗಿ ಹೋಗಿದೆ. ಇತ್ತೀಚೆಗೆ ದೇವಾಲಯ ಪತ್ತೆಯಾಗಿದ್ದು ಗ್ರಾಮಸ್ಥರು ಸೇರಿದಂತೆ ಅನೇಕರಿಗೆ ಕುತೂಹಲದ ಜೊತೆಗೆ ಆಶ್ಚರ್ಯಕರವೆನಿಸಿದ್ದು, ದೇವಾಲಯ ನೋಡಲು ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ರಾವೂರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
ದೇವಾಲಯ ಪತ್ತೆಯಾದದ್ದು ಹೇಗೆ..?
ರಾವೂರ ಗ್ರಾಮದ ಕನಕನಗರದಲ್ಲಿರುವ ಪುರಾತನ ದೇವಾಲಯ ಪತ್ತೆಯ ಹಿಂದೆ‌ ತನ್ನದೆಯಾದ  ಕಥೆಯಿದೆ. ಗ್ರಾಮದ ಕನಕನಗರದ ಯುವಕರು ತಿಪ್ಪೆಗುಂಡಿಯಲ್ಲಿನ ಗೊಬ್ಬರ (ಕಸ) ವನ್ನು ಟ್ರಾಕ್ಟರ್ ಗಳಿಗೆ ತುಂಬಿ ಹೊಲಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ತಿಪ್ಪೆಯಲ್ಲಿ ಕಸ ಖಾಲಿಯಾಗುತ್ತಿದ್ದಂತೆ ಕೆಳಗಡೆ ಅಗೆದು ತೆಗೆಯುವಾಗ ದೇವಸ್ಥಾನದ ಒಂದು ಭಾಗದ ಕಂಬ ದೊರೆತಿದೆ. ನಂತರ ಆಶ್ಚರ್ಯ ಮತ್ತು ಕುತೂಹಲದಿಂದ ಮತ್ತೆಮತ್ತೆ ನೆಲ ಅಗೆಯುವ ಕೆಲಸದಲ್ಲಿ ನಿರತರಾದಾಗ ಒಂದೊಂದು ಕಂಬ ಕಾಣತೋಡಗಿದ್ದು ನಂತರ ದೇವಸ್ಥಾನ ಇದೆ ಎಂದು ಗೋತ್ತಾಗಿದೆ.
ದೇವಸ್ಥಾನ ಇದೇ ಎಂದು ಗೋತ್ತಾಗುತ್ತಿದ್ದಂತೆ ಗ್ರಾಮದ ಕನಕನಗರ ನಿವಾಸಿ ಜಗದೇಶ ಪೂಜಾರಿ ರಾವೂರ ಮತ್ತು ತಂಡದವರು ಅದರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ದೇವಸ್ಥಾನದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ದೇವಸ್ಥಾನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದೇ ಗ್ರಾಮದಲ್ಲಿ ಈಗಾಗಲೇ ಅನೇಕ‌ ಐತಿಹಾಸಿಕ ದೇವಸ್ಥಾನಗಳು ಪತ್ತೆಯಾಗಿದ್ದು, ಇದು ಕೂಡ ಐತಿಹಾಸಿಕ ದೇವಾಲಯ ಇರಬಹುದು ದೇವಸ್ಥಾನವನ್ನು ಸ್ವಚ್ಚಗೊಳಿಸಿ ಜೀರ್ಣೋದ್ಧಾರ ಮಾಡಲು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಸಹಕಾರ ನೀಡಬೇಕೆಂದು ಜಗದೀಶ್ ಪೂಜಾರಿ ರಾವೂರ ಮನವಿ ಮಾಡಿಕೊಂಡಿದ್ದಾರೆ.

No comments:

Post a Comment